ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ ಜಾಲ
Share
ಶ್ರೀಕೃಷ್ಣ ಯಕ್ಷ ಸಭಾ ಪುರಸ್ಕಾರ ಪಾತ್ರರು

ಲೇಖಕರು : ಎಲ್‌. ಎನ್‌. ಭಟ್‌ ಮಳಿಯ
ಸೋಮವಾರ, ಜುಲೈ 8 , 2013
ಮಂಗಳೂರು: ಕದ್ರಿಯ ಶ್ರೀಕೃಷ್ಣ ಯಕ್ಷ ಸಭಾದ ಪ್ರಸಕ್ತ ವರ್ಷದ ಪುರಸ್ಕಾರ ಪಡೆಯುತ್ತಿರುವ ಸಪ್ತ ಸಾಧಕರ ಕಿರು ಪರಿಚಯವನ್ನು ಸಮ್ಮಾನದ ನಿಟ್ಟಿನಲ್ಲಿ ಉಲ್ಲೇಖೀಸುವುದು ಸಕಾಲಿಕ.

ಕಾಸರಗೋಡು ಸುಬ್ರಾಯ ಹೊಳ್ಳ: ಯಕ್ಷಗಾನ ಕಲಾಕ್ಷೇತ್ರದಲ್ಲಿ ಕಳೆದ 29 ವರ್ಷ ಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಕೂಡ್ಲು ನಾರಾಯಣ ಬಲ್ಯಾಯ ಮತ್ತು ಆನಂದ ಬಲ್ಯಾಯರಿಂದ ತೆಂಕುತಿಟ್ಟು ನಾಟ್ಯವನ್ನು ಅಭ್ಯಾಸ ಮಾಡಿದ ಇವರು ಕಟೀಲು ಮೇಳದ ಪ್ರತಿಭಾವಂತ ಕಲಾವಿದರು. ದಕ್ಷ, ಕಾರ್ತವೀರ್ಯ, ರಕ್ತಬೀಜ, ಕರ್ಣ, ಅರ್ಜುನ, ಇಂದ್ರಜಿತು ಹೀಗೆ ಕಿರೀಟ ವೇಷಗಳನ್ನು ಚೆನ್ನಾಗಿ ನಿರ್ವಹಿಸಬಲ್ಲ ಸಮರ್ಥ ವೇಷಧಾರಿ. ಪುತ್ತೂರು, ಕರ್ನಾಟಕ, ಕದ್ರಿ ಮೇಳಗಳಲ್ಲಿ ತಿರುಗಾಟ ಮಾಡಿದ್ದಾರೆ.

ಪುತ್ತೂರು ಗಂಗಾಧರ: ಧರ್ಮಸ್ಥಳ ಯಕ್ಷಗಾನ ತರಬೇತಿ ಕೇಂದ್ರದಲ್ಲಿ ಕೆ. ಗೋವಿಂದ ಭಟ್‌ ಮತ್ತು ಕರ್ಗಲ್ಲು ವಿಶ್ವೇಶ್ವರ ಭಟ್ಟರ ಶಿಷ್ಯರಾಗಿ ಯಕ್ಷಗಾನ ಅಧ್ಯಯನ ಮಾಡಿದ ಪುತ್ತೂರು ಗಂಗಾಧರ ಅವರು ಒಬ್ಬ ಉತ್ತಮ ಸ್ತ್ರೀ ವೇಷಧಾರಿ. ಶ್ರೀದೇವಿ, ದಾûಾಯಿಣಿ, ಲಕ್ಷ್ಮೀ ಮೊದಲಾದ ಪಾತ್ರಗಳನ್ನು ಗೌರವಪೂರ್ಣ ವಾಗಿ ಮಾಡಬಲ್ಲರು. ತಾಟಕಿ, ಘೋರ ಪೂತನಿ ಇತ್ಯಾದಿ ರಾಕ್ಷಸಿ ಸ್ತ್ರೀ ವೇಷವನ್ನು ಚೆನ್ನಾಗಿ ನಿರ್ವಹಿಸುತ್ತಾರೆ. 33 ವರ್ಷಗಳಿಂದ ಧರ್ಮಸ್ಥಳ ಯಕ್ಷಗಾನ ಮಂಡಳಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ನಗ್ರಿ ಮಹಾಬಲ ರೈ
ನಗ್ರಿ ಮಹಾಬಲ ರೈ: ಕಳೆದ 23 ವರ್ಷ ಗಳಿಂದ ಕಟೀಲು ಮೇಳದ ಕಲಾವಿದರಾಗಿ ಹೆಸರು ಗಳಿಸಿರುವ ಮಹಾಬಲ ರೈ ಅವರ ಗುರುಗಳು ಪುತ್ತೂರು ಶೀನಪ್ಪಭಂಡಾರಿ. ಸುಬ್ರಹ್ಮಣ್ಯ, ಧರ್ಮಸ್ಥಳ ಮೇಳಗಳಲ್ಲಿ ತಿರುಗಾಟ ಮಾಡಿದ್ದಾರೆ. ಕುರಿಯ ಗಣಪತಿ ಶಾಸ್ತ್ರಿ ಮತ್ತು ಗೇರುಕಟ್ಟೆ ಗಂಗಯ ಶೆಟ್ಟಿ ಅವರಿಂದ ಹುರಿದುಂಬಿಸಲ್ಪಟ್ಟು ಮಹಿಷಾಸುರನ ಪಾತ್ರವನ್ನು ಮಾಡಿದ ಇವರಿಗೆ ಅದೇ ಪಾತ್ರ ಪ್ರಸಿದ್ಧಿಯನ್ನು ತಂದುಕೊಟ್ಟಿದೆ. ಹೆಣ್ಣು ಬಣ್ಣ ಗಳನ್ನು ಸೂಕ್ತವಾಗಿ ಮಾಡಬಲ್ಲ ನಗ್ರಿಯವರು ಉತ್ತಮ ಬಣ್ಣದ ವೇಷಧಾರಿ.

ಬೋಳಾರ ಸುಬ್ಬಯ್ಯ ಶೆಟ್ಟಿ
ಬೋಳಾರ ಸುಬ್ಬಯ್ಯ ಶೆಟ್ಟಿ: ನಾಲ್ಕು ದಶಕಗಳಿಗೂ ಹೆಚ್ಚಿನ ತಿರುಗಾಟದ ಅನುಭವ ಇರುವ ಹಿರಿಯ ಕಲಾವಿದ. ಬೋಳಾರ ತಿಮ್ಮಯ್ಯ ಸುವರ್ಣ ಮತ್ತು ಬೋಳಾರ ನಾರಾಯಣ ಶೆಟ್ಟಿ ಇವರ ಗುರುಗಳು. ಸುಂಕದಕಟ್ಟೆ, ಕದ್ರಿ, ಮಧೂರು, ಕರ್ನಾಟಕ, ಪುತ್ತೂರು, ಕುಂಟಾರು ಮೇಳಗಳಲ್ಲಿ ಕಲಾ ವ್ಯವಸಾಯ ಮಾಡಿದ್ದಾರೆ. ಇಂದ್ರಜಿತು, ಅರ್ಜುನ, ಕಿರಾತ, ವೀರವರ್ಮ, ಕಂಸ, ಭೀಮ, ಶುಂಭ ಮೊದಲಾದ ವೇಷಗಳನ್ನು ಚೆನ್ನಾಗಿ ನಿರ್ವಹಿಸುವ ಶೆಟ್ಟರು ತುಳು ಪ್ರಸಂಗಗಳಲ್ಲಿ ಪೆರುಮಳ ಬಲ್ಲಾಳ, ಚಂದು ಗಿಡಿ, ದುಗ್ಗಣ್ಣ ಕೊಂಡೆ ಇತ್ಯಾದಿ ವೇಷ ಗಳನ್ನು ಜನ ಮೆಚ್ಚುವಂತೆ ಮಾಡುವರು.

ದೇವಕಾನ ಕೃಷ್ಣ ಭಟ್‌: ಯಕ್ಷಗಾನ ವೇಷಭೂಷಣ ನಿರ್ವಹಣೆಯಲ್ಲಿ ವಿಶೇಷ ಪರಿಣತಿ ಹೊಂದಿರುವ ದೇವಕಾನ ಕೃಷ್ಣ ಭಟ್ಟರು ಹಿರಿಯ ಹವ್ಯಾಸಿ ಕಲಾವಿದರು. ಕುಡಾನ ಗೋಪಾಲಕೃಷ್ಣ ಭಟ್ಟರಿಂದ ನಾಟ್ಯಾಭ್ಯಾಸ ಮಾಡಿದ ಇವರು ಅತಿಕಾಯ, ಕರ್ಣ, ಜಮದಗ್ನಿ, ಅಕ್ರೂರ, ಸಂಜಯ ಮೊದಲಾದ ಪಾತ್ರಗಳನ್ನು ಮನಮುಟ್ಟುವಂತೆ ಮಾಡಬಲ್ಲರು. ಯಕ್ಷಗಾನ ಕಮ್ಮಟ, ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುತ್ತಿರುವ ಕೃಷ್ಣ ಭಟ್ಟರಿಗೆ 2012ರ ಯಕ್ಷಗಾನ ಅಕಾಡೆಮಿಯ ಪ್ರಸಾಧನ ವಿಭಾಗದ ಪ್ರಶಸ್ತಿ ದೊರೆತಿದೆ. ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

ಹೆರಂಜಾಲು ಗೋಪಾಲ ಗಾಣಿಗ
ಹೆರಂಜಾಲು ಗೋಪಾಲ ಗಾಣಿಗ: ಬಡಗುತಿಟ್ಟಿನ ಪ್ರಸಿದ್ಧ ಭಾಗವತರಲ್ಲಿ ಒಬ್ಬರು. ಸಾಲಿಗ್ರಾಮ, ಮಂದಾರ್ತಿ, ಮಾರಣಕಟ್ಟೆ ಮೇಳಗಳಲ್ಲಿ ಭಾಗವತರಾಗಿ ಸೇವೆ ಸಲ್ಲಿಸಿದ್ದಾರೆ. ತಮ್ಮ ತಂದೆ ಹೆರಂಜಾಲು ವೆಂಕಟರಮಣ ಗಾಣಿಗರಿಂದಲೇ ಭಾಗವತಿಕೆ ಕಲಿತವರು. ಹೆರಂಜಾಲು ಯಕ್ಷಗಾನ ಪ್ರತಿಷ್ಠಾನದ ಮೂಲಕ ಬಹುಮುಖ ಕಲಾಸೇವೆ ಸಲ್ಲಿಸುತ್ತಿದ್ದಾರೆ. ಸಾಲಿಗ್ರಾಮ ಮೇಳದಲ್ಲಿ "ಈಶ್ವರಿ ಪರಮೇಶ್ವರಿ' ಪ್ರಸಂಗದ ಭಾಗವತಿಕೆ ಇವರಿಗೆ ವಿಶೇಷ ಪ್ರಸಿದ್ಧಿಯನ್ನು ತಂದುಕೊಟ್ಟಿದೆ.

ವೇಣೂರು ಸದಾಶಿವ ಕುಲಾಲ್‌: ಪಡ್ರೆ ಚಂದು ಅವರಲ್ಲಿ ಯಕ್ಷಗಾನ ನಾಟ್ಯಾಭ್ಯಾಸ ಮಾಡಿದ ಸದಾಶಿವ ಕುಲಾಲ್‌ ಅವರು ಯಕ್ಷವೀರನಾಗಿ ಮೆಚ್ಚುಗೆ ಗಳಿಸಿದ್ದಾರೆ. ಭಾರ್ಗವ, ಬಬ್ರುವಾಹನ, ಅಭಿಮನ್ಯು ಮೊದಲಾದ ತರುಣ ಪಾತ್ರಗಳನ್ನು ವೀರಾವೇಶದಿಂದ ಮೆರೆಸಬಲ್ಲ ಸಮರ್ಥ ಪುಂಡು ವೇಷಧಾರಿ ಇವರು. ಸುರತ್ಕಲ್‌, ಮಂಗಳಾದೇವಿ ಮೇಳಗಳಲ್ಲಿ ತಿರುಗಾಟದ ಬಳಿಕ ಈಗ ಹೊಸನಗರ ಮೇಳದಲ್ಲಿ ವೃತ್ತಿನಿರತರಾಗಿದ್ದಾರೆ.

ಕೃಪೆ : http://www.udayavani.com


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ